ನ್ಯೂಯಾರ್ಕ್ (ನಗರ) - 
ನ್ಯೂ ಯಾರ್ಕ್ ರಾಜ್ಯದ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಅತ್ಯಂತ ದೊಡ್ಡ ನಗರ ಮತ್ತು ಬಂದರು, ಪ್ರಪಂಚದ ಮಹಾನಗರಗಳಲ್ಲಿ ಎರಡನೆಯದು (ಮೊದಲನೆಯದು ಟೋಕಿಯೋ). ಇದು ದೇಶದ ಆರ್ಥಿಕ, ವಾಣಿಜ್ಯಕ ಮತ್ತು ಸಾಂಸ್ಕøತಿಕ ಕೇಂದ್ರ. ಇಲ್ಲಿಯ ಮಾರುಕಟ್ಟೆಗಳು ಪ್ರಪಂಚದಲ್ಲಿ ಸರಕುಗಳ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ. ಪ್ರಪಂಚದಲ್ಲಿ ಶಾಂತಿಸ್ಥಾಪನೆಯ ಹಂಬಲದ ಪ್ರತೀಕವಾದ ವಿಶ್ವಸಂಸ್ಥೆಯ ಕೇಂದ್ರ ಕಛೇರಿ ಇಲ್ಲಿದೆ. ಇದು ನ್ಯೂ ಯಾರ್ಕ್  ರಾಜ್ಯದಲ್ಲಿ ನಾಟಕ, ಸಂಗೀತ, ಕಲೆಗಳಿಗೆ ಕೇಂದ್ರವಾಗಿದೆ.

	ನ್ಯೂ ಯಾರ್ಕ್ ದ್ವೀಪಗಳ ನಗರ. ಇದು ಮ್ಯಾನ್‍ಹ್ಯಾಟನ್, ಬ್ರಾಂಕ್ಸ್, ಬ್ರೂಕ್ಲಿನ್, ಕ್ವೀನ್ಸ್ ಮತ್ತು ರಿಚ್ಮಂಡ್ ಎಂಬ ವಿಭಾಗಗಳನ್ನೊಳಗೊಂಡಿದೆ. ನಗರದ ಹೃದಯವೆನ್ನಬಹುದಾದ ಮ್ಯಾನ್‍ಹ್ಯಾಟನ್ ವಿಭಾಗ ಹಡ್ಸನ್ ಮತ್ತು ಈಸ್ಟ್ ನದಿಗಳ ಸಂಗಮದಲ್ಲಿರುವ ಮ್ಯಾನ್‍ಹ್ಯಾಟನ್ ದ್ವೀಪದ ಮೇಲಿದೆ. ರಾಜ್ಯದ ಭೂ ಭಾಗದ ಮೇಲೆ ಇರುವ ಬ್ರಾಂಕ್ಸ್ ಒಂದನ್ನು ನೀರು ಸುತ್ತುವರಿದಿಲ್ಲ. ಇದು ಮ್ಯಾನ್‍ಹ್ಯಾಟನ್ನಿನ ಈಶಾನ್ಯಕ್ಕೆ ಮತ್ತು ಕ್ವೀನ್ಸಿನ ಉತ್ತರಕ್ಕೆ ಇದೆ. ಹಾರ್ಲೆಮ್ (ಹಡ್ಸನ್ ಮತ್ತು ಈಸ್ಟ್ ನದಿಗಳನ್ನು ಕೂಡಿಸುವ, ಅನೇಕ ಸೇತುವೆಗಳಿಂದ ಕೂಡಿದ, ಸಮುದ್ರದ ಒಂದು ಇಕ್ಕಟ್ಟಾದ ತೋಳು) ಮತ್ತು ಈಸ್ಟ್ ನದಿ ಇದನ್ನು ಆ ವಿಭಾಗಗಳಿಂದ ಬೇರ್ಪಡಿಸಿದೆ. ರಿಚ್ಮಂಡ್ ವಿಭಾಗ ಸ್ಟ್ಯಾಟೆನ್ ದ್ವೀಪದ ಮೇಲಿದೆ.

	ನ್ಯೂ ಯಾರ್ಕ್‍ನಗರ ಅದೇ ಹೆಸರಿನ ರಾಜ್ಯದ ಆಗ್ನೇಯ ಭಾಗದಲ್ಲಿ ಹಡ್ಸನ್ ನದಿ ಅಟ್ಲಾಂಟಿಕ್ ಸಾಗರವನ್ನು ಸೇರುವಲ್ಲಿ ಇದೆ. ಪ್ರಾರಂಭದಲ್ಲಿ ಯೂರೋಪಿನಿಂದ ಬಂದ ನೆಲಸಿಗರು ನೌಕೆಗಳಿಂದ ಇಳಿದು ಭೂ ಪ್ರದೇಶವನ್ನು ಸೇರುವುದಕ್ಕೆ ಸಹಜವಾಗಿಯೇ ಈ ಸ್ಥಳವನ್ನು ಆರಿಸಿದರು. ಏಕೆಂದರೆ ಇದಕ್ಕೆ ಸ್ಟ್ಯಾಟೆನ್ ದ್ವೀಪ ಮತ್ತು ಸ್ಯಾಂಡಿ ಹುಕ್‍ಗಳಿಂದ ನೈಸರ್ಗಿಕ ರಕ್ಷಣೆ ಒದಗಿತ್ತು. ಹಡ್ಸನ್ ನದಿ ಒಳನಾಡಿನಲ್ಲಿ ಹೋಗಲು ಸುಲಭವಾಗಿ ನೀರಹಾದಿಯನ್ನೊದಗಿಸುತ್ತಿದ್ದುದರಿಂದ ವ್ಯಾಪಾರದೃಷ್ಟಿಯಿಂದಲೂ ಈ ಸ್ಥಳ ಅನುಕೂಲವಾಗಿತ್ತು. ಅನಂತರ ಬಂದ ವಲಸೆಗಾರರಿಗೂ ಇದು ಒಳನಾಡನ್ನು ಸೇರುವುದಕ್ಕೆ ಲಾಳಿಕೆಯಾಗಿತ್ತು.

	ಹಡ್ಸನ್ ನದಿಯ ಕೊರೆತದಿಂದಾಗಿ ಬಂದರು ಆಳವಾಗಿರುವುದರಿಂದ ದೊಡ್ಡ ಹಡಗುಗಳು ಕೂಡ ಹಡ್ಸನ್ ನದಿಯ ವರೆಗೆ ಬಂದು ನಿಲ್ಲಬಹುದಾಗಿದೆ. ದೇಶದಲ್ಲೇ ನ್ಯೂಯಾರ್ಕ್ ಅತ್ಯಂತ ದೊಡ್ಡ ಬಂದರು. ರಾಷ್ಟ್ರದ ಈ ಅತ್ಯಂತ ಸಂಪನ್ನ ಬಂದರಿನ ಮೂಲಕ ವರ್ಷದಲ್ಲಿ 18,10,24,686 ಟನ್ ಸರಕು ಸಾಗುತ್ತದೆ. ಅದರಲ್ಲಿ ಅರ್ಧದಷ್ಟು ವಿದೇಶಿ ಸರಕು. ಈ ಬಂದರಿನ ಮೂಲಕ ರಫ್ತಾಗುವ ಸರಕುಗಳಲ್ಲಿ ಮುಖ್ಯವಾದವು ಗೋದಿ ಮತ್ತು ಗೋದಿಹಿಟ್ಟು., ಮೋಟಾರುಗಾಡಿಗಳು, ಬಟ್ಟೆ, ಉಡುಪು,  ತಂಬಾಕು, ಯಂತ್ರದ ಸಾಮಾನು, ರಸಾಯನ ಪದಾರ್ಥ, ಕಾಗದ ಮತ್ತು ಆಹಾರ ಪದಾರ್ಥಗಳು. ಆಮದಾಗುವ ಸರಕುಗಳಲ್ಲಿ ಮುಖ್ಯವಾದವು ಎಣ್ಣೆ, ಸಕ್ಕರೆ, ಎಣ್ಣೆಕಾಳು, ಮರದತಿಳ್ಳು, ಸಸ್ಯನಾರು, ಕೋಕೋ ಕಾಫಿ, ರಬ್ಬರ್, ತಾಮ್ರ, ಬಂಗಾರಗಟ್ಟಿ, ಬಾಳೆ ಮತ್ತು ಇತರ ಹಣ್ಣುಗಳು.

	ನ್ಯೂ ಯಾರ್ಕ್ ನಗರಕ್ಕೆ ಒಳನಾಡಿನೊಡನೆ ಮತ್ತು ಬಾಹ್ಯಪ್ರಪಂಚದೊಡನೆ ಭೂ, ಜಲ ಮತ್ತು ವಾಯುಮಾರ್ಗಗಳ ಮೂಲಕ ಒಳ್ಳೆಯ ಸಂಪರ್ಕವಿದೆ. ಎರಡು ಪ್ರಮುಖ ರೈಲುಮಾರ್ಗಗಳು ಪೆನ್ಸಿಲ್ವೇನಿಯ ಮತ್ತು ಗ್ರ್ಯಾಂಡ್ ಸೆಂಟ್ರಲ್ ನಿಲ್ದಾಣಗಳಲ್ಲಿ ಕೊನೆಗೊಳ್ಳುತ್ತದೆ. 42 ಅಂತರರಾಜ್ಯ ಬಸ್ ಸಾರಿಗೆಗಳು ಇದರೊಳಗಿಂದ ಹಾಯ್ದು ಹೋಗುತ್ತವೆ.  ನೆಲದೊಳಗಿನ ಮಾರ್ಗಗಳ ಜಾಲ ರಿಚ್ಮಂಡಿನ ಹೊರತಾಗಿ ಉಳಿದೆಲ್ಲ ಬರೋಗಳನ್ನೂ ಮುಟ್ಟುತ್ತದೆ. ಜಲಮಾರ್ಗ, ಮತ್ತು 1,298 ಮೀ. ಉದ್ದದ ತೂಗುಸೇತುವೆಯೊಂದು ರಿಚ್ಮಂಡನ್ನು ಮ್ಯಾನ್‍ಹ್ಯಾಟನ್ ಮತ್ತು ಬ್ರೂಕ್ಲಿನ್ ಗಳೊಡನೆ ಕೂಡಿಸುತ್ತವೆ. 18ಕ್ಕೂ ಹೆಚ್ಚು ಸೇತುವೆಗಳು ಮ್ಯಾನ್‍ಹ್ಯಾಟನ್ನಿಗೂ ಉಳಿದ ವಿಭಾಗಗಳಿಗೂ ಸಂಪರ್ಕ ಒದಗಿಸುತ್ತವೆ. ಹಡ್ಸನ್ ನದಿಯ ಮೇಲಿನ ಜಾರ್ಜ್ ವಾಷಿಂಗ್‍ಟನ್ ಸೇತುವೆಯಿಂದ ನ್ಯೂ ಜರ್ಸಿಯೊಡನೆ ಸಂಪರ್ಕ ಏರ್ಪಟ್ಟಿದೆ. 1883ರಲ್ಲಿ ಸಂಚಾರಕ್ಕೆ ತೆರೆಯಲಾದ ಬ್ರೂಕ್ಲಿನ್ ಸೇತುವೆ ಎಲ್ಲಕ್ಕೂ ಹಳೆಯದು. ಹಡ್ಸನ್ ಮತ್ತು ಈಸ್ಟ್ ನದಿಗಳ ಕೆಳಗೆ 5 ಸುರಂಗಮಾರ್ಗಗಳಿವೆ. ಡ್ಯೂಯಿ ಹೆದ್ದಾರಿ ಪೆನ್ಸಿಲ್ವೇನಿಯ ಗಡಿಯ ವರೆಗೂ ಹೋಗಿದೆ. ಸ್ಟೇಟ್ ಜಾರ್ಜ್ ಕಾಲುವೆ ವ್ಯವಸ್ಥೆ 1,280 ಕಿಮೀ. ಉದ್ದವಿದೆ. ಇದರಿಂದ ನಗರಕ್ಕೆ ಸೇಂಟ್‍ಲಾರೆನ್ಸ್ ಸಮುದ್ರ ಮಾರ್ಗ ದೊಂದಿಗೂ ಮಹಾಸರೋವರಗಳೊಂದಿಗೂ ಸಂಪರ್ಕಏರ್ಪಟ್ಟಿದೆ.

	ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಾಷ್ಟ್ರದ ವಿಮಾನ ಸಾರಿಗೆಯ ಶೇ.50 ರಷ್ಟನ್ನು ನಿರ್ವಹಿಸುತ್ತದೆ. ವಿಮಾನದ ಮೂಲಕ ರಫ್ತು ಮತ್ತು ಆಮದಾಗುವ ಸರಕಿನ ಶೇ.53ರಷ್ಟು ಈ ಮೂಲಕ ಸಾಗುತ್ತದೆ. ಪ್ರತಿ ವರ್ಷ ಸುಮಾರು ಒಂದೂವರೆ ಕೋಟಿ ಪ್ರವಾಸಿಗಳು ಇಲ್ಲಿಂದ ಪ್ರವಾಸಮಾಡುವರೆಂದು ಊಹಿಸಲಾಗಿದೆ. 58 ಅಂತರರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆಗಳ ವಿಮಾನಗಳು ಈ ನಿಲ್ದಾಣವನ್ನು ಉಪಯೋಗಿಸುತ್ತವೆ. ಲಾ ಗಾರ್ಡಿಯ ವಿಮಾನ ನಿಲ್ದಾಣವನ್ನು 11 ದೇಶೀಯ ವಿಮಾನ ಸಾರಿಗೆ ವ್ಯವಸ್ಥೆಗಳು ಉಪಯೋಗಿಸುತ್ತವೆ. ನಗರದಲ್ಲಿ 5 ಹೆಲಿಕಾಪ್ಟರ್ ನಿಲ್ದಾಣಗಳೂ ಉಂಟು.

	ಜೋ ವಾನ್ನೀ ಡಾ ವೇರಾಟ್ಸಾನೋ ಎಂಬುವನು 1524ರಲ್ಲಿ ನ್ಯೂ ಯಾರ್ಕ್ ಬಂದರಿನವರೆಗೆ ಹೋಗಿ ಮ್ಯಾನ್‍ಹ್ಯಾಟನ್ ದ್ವೀಪವನ್ನು ಮೊದಲಿಗೆ ಕಂಡ ಐರೋಪ್ಯನೆಂದು ಹೇಳಲಾಗಿದೆ. ಡಚ್ಚರ ಊಳಿಗದಲ್ಲಿದ್ದ ಹೆನ್ರಿಹಡ್ಸನ್ ಎಂಬ ಇಂಗ್ಲಿಷ್ ಪ್ರಜೆ 1609ರಲ್ಲಿ ಬಂದರನ್ನು ಮತ್ತು ಈಗ ತನ್ನ ಹೆಸರನ್ನು ಹೊತ್ತಿರುವ ಹಡ್ಸನ್ ನದಿಯನ್ನು ಸುತ್ತಿನೋಡಿ ಪರಿಶೀಲಿಸುವುದಕ್ಕೂ ಮೊದಲು ಅನೇಕ ಐರೋಪ್ಯ ಶೋಧಕರು ಹಡ್ಸನ್ ನದಿಯ ಮುಖದ ವರೆಗೆ ಹೋಗಿದ್ದರು. 1613ರಲ್ಲಿ ಏಡ್ರಿಯನ್ ಬ್ಲಾಕ್ ಎಂಬ ಡಚ್ ಪ್ರಜೆ ಲಾಂಗ್ ಐಲೆಂಡ್ ಜಲಸಂಧಿಯನ್ನು ಶೋಧಮಾಡಿ ಮ್ಯಾನ್ ಹ್ಯಾಟನ್ ದ್ವೀಪದ ಕೆಳಗಿನ ಪ್ರದೇಶದಲ್ಲಿ ವ್ಯಾಪಾರಕೋಠಿಯೊಂದನ್ನು ಕಟ್ಟಿದ. 1616ರಲ್ಲಿ ಆಮ್ಸ್ಟರ್‍ಡ್ಯಾಮಿನ ನ್ಯೂ ನೆದರ್ಲೆಂಡ್ ಕಂಪನಿ ಮ್ಯಾನ್ ಹ್ಯಾಟನ್ ಕೋಟೆಯನ್ನು ಕಟ್ಟಿಸಿತು. 1621ರಲ್ಲಿ ಡಚ್ ವೆಸ್ಟ್ ಇಂಡಿಯ ಕಂಪನಿ ಸ್ಥಾಪಿತವಾಯಿತು. ಕಂಪನಿಯ ಗವರ್ನರ್ ಪೀಟರ್ ಮಿನಿಟ್ ಇಂಡಿಯನರಿಂದ 24 ಡಾಲರ್ ಬೆಲೆಯ ವಸ್ತುಗಳಿಗೆ ಮ್ಯಾನ್‍ಹ್ಯಾಟನ್ ದ್ವೀಪವನ್ನು ಕೊಂಡು ಅದರ ಮೇಲೆ ಕೋಟೆಯೊಂದನ್ನು ಕಟ್ಟಿ ಅದಕ್ಕೆ ನ್ಯೂ ಆಮ್‍ಸ್ಟರ್‍ಡ್ಯಾಮ್ ಎಂಬ ಹೆಸರಿಟ್ಟ. ಆಗ ಇಲ್ಲಿಯ ವಸತಿಗೂ ನ್ಯೂ ಆಮ್‍ಸ್ಟರ್‍ಡ್ಯಾಮ್ ಎಂಬ ಹೆಸರೇ ಬಂತು. ಆಗ ಅಲ್ಲಿಯ ಜನಸಂಖ್ಯೆ 200. 1613ರಲ್ಲಿ ಡಚ್ಚರು 120 ಆಲ್ಗಾನ್ ಕ್ಲಿನ್ ಇಂಡಿಯನರನ್ನು ಕೊಂದದ್ದರಿಂದ ಇಂಡಿಯನರೊಡನೆ ಎರಡು ವರ್ಷಗಳ ಯುದ್ಧ ಪ್ರಾರಂಭವಾಯಿತು. ಈ ಯುದ್ಧದ ಪರಿಣಾಮವಾಗಿ ಜನಸಂಖ್ಯೆ ಬಹಳಷ್ಟು ಇಳಿಯಿತು. ಆದರೆ ಮುಂದೆ ಇದರ ಜನಸಂಖ್ಯೆ ಬೆಳೆದು 1653ರಲ್ಲಿ ಇದು ಪಟ್ಟಣವಾಯಿತು.

	ಇಂಗ್ಲಿಷರು ಈ ಪ್ರದೇಶವನ್ನು ತಮ್ಮದೆಂದೇ ಸಾಧಿಸುತ್ತಿದ್ದರು. ಹಡಗು ಪಡೆಯೊಂದಿಗೆ ಈ ವಸತಿಯನ್ನು ಆಕ್ರಮಿಸುವುದಕ್ಕೆ ಕರ್ನಲ್ ರಿಚರ್ಡ್ ನಿಕಾಲ್ಸನನ್ನು 1664ರಲ್ಲಿ ಇಂಗ್ಲೆಂಡಿನ ದೊರೆ 2ನೆಯ ಚಾಲ್ರ್ಸ್ ಕಳುಹಿದ. ಯುದ್ಧವಿಲ್ಲದೆ ಇದು ನಿಕಾಲ್ಸನ ವಶವಾಯಿತು. ಅವನು ಇದರ ಮೊದಲನೆಯ ಗವರ್ನರನಾದ. ಅವನು ಇದಕ್ಕೆ ನ್ಯೂ ಯಾರ್ಕ್ ಎಂಬ ಹೆಸರನ್ನು ಕೊಟ್ಟ. ಅವನು ಅನೇಕ ಡಚ್ಚರನ್ನು ಅಧಿಕಾರದಲ್ಲಿಟ್ಟುಕೊಂಡದ್ದಲ್ಲದೆ ಅವರ ಸ್ವತ್ತಿನ ಹಕ್ಕನ್ನು ಮನ್ನಿಸಿ ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನೂ ನೀಡಿದ. ಆದರೆ 1668ರಲ್ಲಿ ಅವನ ಸ್ಥಾನಕ್ಕೆ ಬಂದ ಫ್ರಾನ್ಸಿಸ್ ಲವ್‍ಬೇಸ್ ಗರ್ವಿಷ್ಠನಾಗಿದ್ದು ವಲಸೆಗಾರರ ದ್ವೇಷ ಕಟ್ಟಿಕೊಂಡ. ಅವರು ಅವನ ಪೂರ್ಣವಿರೋಧಿಗಳಾಗಿ ಪರಿಣಮಿಸಿದರು. 1673ರಲ್ಲಿ ಬಂದ ಡಚ್ ಪಡೆಗೆ ಅವರು ಶರಣಾಗತರಾದರು. ಡಚ್ಚರು ಈ ವಸಾಹತಿಗೆ ನ್ಯೂ ಆರೆಂಜ್ ಎಂಬ ಹೆಸರನ್ನು ಇಟ್ಟರು. 1674ರ ನವೆಂಬರ್‍ನಲ್ಲಿ ಇಂಗ್ಲಿಷರು ಇದನ್ನು ಮರಳಿ ಪಡೆದುಕೊಂಡು ಇದಕ್ಕೆ ನ್ಯೂ ಯಾರ್ಕ್ ಎಂಬ ಹೆಸರನ್ನೇ ಮತ್ತೆ ಇಟ್ಟರು. 1689ರಲ್ಲಿ ಜರ್ಮನ್ ವ್ಯಾಪಾರಿಯೊಬ್ಬ ಇಂಗ್ಲಿಷ್ ಗವರ್ನರನನ್ನು ತಳ್ಳಿಹಾಕಿ 1691ರ ವರೆಗೂ ಆಳಿದ. ಅನಂತರ ಅವನನ್ನು ಸೆರೆಹಿಡಿದು ರಾಜದ್ರೋಹಿಯೆಂದು ಗಲ್ಲಿಗೇರಿಸಲಾಯಿತು. ಅಲ್ಲಿಂದೀಚೆಗೆ ಅಮೆರಿಕನ್ ಕ್ರಾಂತಿಯ ವರೆಗೂ ಇದು ಇಂಗ್ಲಿಷರ ವಶದಲ್ಲೇ ಇತ್ತು.

	ಅಮೆರಿಕನ್ ಕ್ರಾಂತಿಯುದ್ಧದ ಸಮಯದಲ್ಲಿ ನ್ಯೂ ಯಾರ್ಕ್ ಬ್ರಿಟಿಷ್ ದಂಡುಗಳಿಗೂ ಅಮೆರಿಕನರಿಗೂ ನಡೆದ ಅನೇಕ ಕದನಗಳ ರಂಗವಾಗಿತ್ತು. ಇದನ್ನು 1776 ರಿಂದ 1781ರ ವರೆಗೆ ಬ್ರಿಟಿಷರು ತಮ್ಮ ವಶದಲ್ಲಿಟ್ಟುಕೊಂಡಿದ್ದರು. 1783ರಲ್ಲಿ ಜಾರ್ಜ್ ವಾಷಿಂಗ್‍ಟನ್ ಇದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. 33,000 ಜನಸಂಖ್ಯೆಯಿದ್ದ  ಇದು ಆ ವೇಳೆಗಾಗಲೇ ದೇಶದ ಅತಿದೊಡ್ಡ ಪಟ್ಟಣವಾಗಿತ್ತು. ಆದರೆ ಇದು ಮ್ಯಾನ್ ಹ್ಯಾಟನ್ ದ್ವೀಪದ ಹೊರಗೆ ವ್ಯಾಪಿಸಿರಲಿಲ್ಲ.

	19ನೆಯ ಶತಮಾನದ ಪೂರ್ವಾರ್ಧದಲ್ಲಿ ನಗರ ಬಹಳ ಬೆಳೆಯಿತು. ಯೂರೋಪಿನಿಂದ, ಅದರಲ್ಲೂ ವಿಶೇಷವಾಗಿ ಜರ್ಮನಿ ಮತ್ತು ಐರ್ಲೆಂಡ್‍ಗಳಿಂದ, ಅಧಿಕ ಸಂಖ್ಯೆಯಲ್ಲಿ ವಲಸೆಗಾರರು ಬಂದದ್ದೂ ನಗರದಿಂದ ಒಳನಾಡಿಗೆ ಅನೇಕ ಮಾರ್ಗಗಳು ತೆರೆದದ್ದೂ ಇದಕ್ಕೆ ಕಾರಣಗಳು. ಬಂದರಿನಲ್ಲಿ ವ್ಯಾಪಾರ ಬೆಳೆಯತೊಡಗಿತು. 19ನೆಯ ಶತಮಾನದ ಕೊನೆಯಲ್ಲಿ ಇಟಲಿ, ಪೋಲೆಂಡ್, ಗ್ರೀಸ್, ಹಂಗರಿ, ಸ್ಕಾಂಡಿನೇವಿಯಗಳಿಂದ ಹೆಚ್ಚು ಸಂಖ್ಯೆಯಲ್ಲಿ ಜನರು ವಲಸೆ ಬಂದರು. ಇದರಿಂದ ನಗರಪ್ರದೇಶ ಬೆಳೆಯಿತು. ಮ್ಯಾನ್‍ಹ್ಯಾಟನ್ ದ್ವೀಪದ  ಸುತ್ತಮುತ್ತಲಿನ ದ್ವೀಪಗಳಿಗೆ ಮತ್ತು ರಾಜ್ಯದ ಮುಖ್ಯ ಭೂ ಭಾಗಕ್ಕೆ ವಸತಿಗಳು ಹಬ್ಬಿದುವು. ಹೀಗೆ ಬೆಳೆದ ನಗರ 1898ರ ಗ್ರೇಟರ್ ನ್ಯೂ ಯಾರ್ಕ್ ಆಗಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು.

	ಈಗ ಇನ್ನೊಂದು ಮಹಾನಗರ. ಇದರ ಜನಸಂಖ್ಯೆ 78,95,563 (1970). ಪ್ರಪಂಚದ ಎಲ್ಲ ಭಾಗಗಳ ಜನರೂ ಇದರಲ್ಲಿ ಸೇರಿದ್ದಾರೆ. ಭಿನ್ನ ಭಿನ್ನ ಮತೀಯರೂ ಇದ್ದಾರೆ. 20,00,000 ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಯಹೂದ್ಯರು ಬ್ರೂಕ್ಲಿನ್ ಮತ್ತು ಬ್ರಾಂಕ್ಸ್ ಬರೋಗಳಲ್ಲಿ ಕೇಂದ್ರೀಕೃತರಾಗಿದ್ದಾರೆ. 10,00,000 ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ನೀಗ್ರೋ ಜನರಲ್ಲಿ 3,50,000 ದಷ್ಟು ಮಂದಿ ಹಾರ್ಲೆಮ್‍ನ ಪ್ರದೇಶದಲ್ಲೂ ಉಳಿದವರು ಬೆಡ್‍ಫರ್ಡ್-ಸ್ಟ್ಯಿವ್ ಸಾಂಟ್(ಬ್ರೂಕ್ಲಿನ್) ಮತ್ತು ಆಗ್ನೇಯ ಬ್ರಾಂಕ್ಸ್‍ನಲ್ಲೂ ವಾಸವಾಗಿದ್ದಾರೆ. ಪೂರ್ವ ಹಾರ್ಲೆಮ್‍ನಲ್ಲಿ ಸುಮಾರು 10,00,000 ಐರಿಷ್ ಹಾಗೂ 6,00,000 ಪ್ವೆರ್ಟೊರಿಕನ್ ಮೂಲದವರು ಇದ್ದಾರೆ. ಸ್ಥಳದ ಅಭಾವದಿಂದಾಗಿ ನಗರ ಎತ್ತರಕ್ಕೆ ಬೆಳೆಯುತ್ತಿದೆ.

	ನ್ಯೂ ಯಾರ್ಕ್‍ನಲ್ಲಿ ತುಪ್ಪಳದ ಉಡುಪುಗಳೂ ಸೇರಿದಂತೆ ಮುಖ್ಯವಾಗಿ ಬಳಕೆಯ ಸರಕುಗಳು ತಯಾರಾಗುತ್ತವೆ. 1972ರ ಜನವರಿಯಲ್ಲಿ ಇಲ್ಲಿ ಒಟ್ಟು 38,129 ತಯಾರಿಕಾ ಸಂಸ್ಥೆಗಳಿದ್ದವು. ಅಮೆರಿಕದಲ್ಲಿ ತಯಾರಾಗುವ ಉಡುಪುಗಳಲ್ಲಿ ಶೇ.25.3 ರಷ್ಟು ಅಮೆರಿಕದ ಮುದ್ರಣ ಹಾಗೂ ಪ್ರಕಾಶನದಲ್ಲಿ ಶೇ.18.2 ರಷ್ಟ, ಚರ್ಮ ಮತ್ತು ಚರ್ಮದ ವಸ್ತುಗಳಲ್ಲಿ ಶೇ.10ರಷ್ಟು, ಆಭರಣ, ಗೊಂಬೆ ಮುಂತಾದ ವಿವಿಧ ಸರಕುಗಳಲ್ಲಿ ಶೇ.7ರಷ್ಟು ಜೋಡಿಸಿದ ಲೋಹವಸ್ತು ಮತ್ತು ವಿದ್ಯುತ್ತಿನ ಉಪಕರಣಗಳಲ್ಲಿ ಶೇ.4.6ರಷ್ಟು ಜವಳಿಯಲ್ಲಿ ಶೇ.4.3 ರಷ್ಟು ಮತ್ತು ಆಹಾರ ಪದಾರ್ಥಗಳಲ್ಲಿ ಶೇ.3.2ರಷ್ಟು ಇಲ್ಲಿ ತಯಾರಾಗುತ್ತವೆ. ಕೈಗಾರಿಕೆ ಔದ್ಯೋಗಿಕ ಸಂಸ್ಥೆಗಳು ಬ್ರಾಂಕ್ಸ್, ಕ್ವೀನ್ಸ್, ರಿಚ್ಮಂಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿವೆ. ಹೆಚ್ಚು ರಾಸಾಯನಿಕ ಮತ್ತು ಎಣ್ಣೆ ಶುದ್ಧೀಕರಣ ಕಾರ್ಖಾನೆಗಳು ನ್ಯೂ ಜರ್ಸಿಯಲ್ಲಿವೆ. ಮಧ್ಯ ಮ್ಯಾನ್‍ಹ್ಯಾಟನ್ ಪ್ರದೇಶದಲ್ಲಿ ಉಡುಪಿನ ಕಾರ್ಖಾನೆಗಳು ಅಧಿಕವಾಗಿವೆ. ಮುದ್ರಣ ಮತ್ತು ಪ್ರಕಾಶನ ಸಂಸ್ಥೆಗಳೂ ಇಲ್ಲಿಯೇ ಹೆಚ್ಚಾಗಿವೆ. ಮನೋರಂಜನೆಗೆ ಬ್ರಾಡ್‍ವೇ, ಜಾಹೀರಾತಿಗೆ ಮ್ಯಾಡಿಸನ್ ಅವೆನ್ಯೂ ಹೆಸರಾಗಿವೆ. ಕೆಲಸದಲ್ಲಿದ್ದವರ ಸಂಖ್ಯೆ 1972ರಲ್ಲಿ 35,60,100. ಜನರ ತಲಾ ವಾರ್ಷಿಕ ವರಮಾನ 5,292 ಡಾಲರುಗಳು.

	ಸ್ಟಾಕು ವಿನಿಮಯ ಕೇಂದ್ರವಿರುವ ವಾಲ್‍ಸ್ಟ್ರೀಟ್ ಜಗತ್ತಿನ ಅತ್ಯಂತ ದೊಡ್ಡ ಹಣಕಾಸು ಕೇಂದ್ರ, ನ್ಯೂ ಯಾರ್ಕ್ ನ್ಯೂ ಜರ್ಸಿ ಮತ್ತು ನೈಋತ್ಯ ಕನೆಕ್ಟಿಕಟ್ ಪ್ರದೇಶಗಳಿಗೆ ಇದು ಸಗಟು ಮತ್ತು ಚಿಲ್ಲರೆ ವ್ಯವಹಾರಕೇಂದ್ರ. 35 ವಾಣಿಜ್ಯ ಬ್ಯಾಂಕುಗಳು, 43 ಉಳಿತಾಯ ಬ್ಯಾಂಕುಗಳು, ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ವಾಣಿಜ್ಯ ಕೇಂದ್ರ ಇಲ್ಲಿವೆ.

	ನ್ಯೂ ಯಾರ್ಕ್ ನಗರದಲ್ಲಿ ಪ್ರೇಕ್ಷಣೀಯ ಸ್ಥಳಗಳು, ಕಟ್ಟಡಗಳು, ನಿವೇಶನಗಳು ಹಲವಾರಿವೆ. 45.8 ಮೀ. ಎತ್ತರ ಇರುವ ಪೀಠದ ಮೇಲೆ ನಿಂತ 46.4 ಮೀ ಎತ್ತರದ ಸ್ವಾತಂತ್ರ್ಯ ವಿಗ್ರಹ, 102 ಅಂತಸ್ತುಗಳಿರುವ 381 ಮೀ. ಎತ್ತರದ ಕಟ್ಟಡವಾದ ಎಂಪೈರ್ ಸ್ಟೇಟ್ ಭವನ, ಸೆಂಟ್ರಲ್ ಪಾರ್ಕ್, ಬ್ರಾಂಕ್ಸ್ ಪ್ರಾಣಿಸಂಗ್ರಹಾಲಯ, ಸಸ್ಯೋದ್ಯಾನ, ಪ್ರಪಂಚದಲ್ಲೇ ಅಸಮಾನವಾದ ವಸ್ತು ಸಂಗ್ರಹಾಲಯ. ಪ್ರಾಣಿ ವಿಜ್ಞಾನದ ಅಮೆರಿಕನ್ ಮ್ಯೂಸಿಯಂ ಇವು ನೋಡ ತಕ್ಕಂಥವು. ನಾಟಕ ಸಂಗೀತ ಕಲೆಗಳಿಗೂ ನ್ಯೂ ಯಾರ್ಕ್ ಪ್ರಸಿದ್ಧವಾಗಿದೆ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ